ರಿಸ್ಲೆ, ಎಚ್ ಎಚ್
1851-1911. ಬ್ರಿಟಿಷ್ ಪುರಾತತ್ತ್ವಜ್ಞ, ಮಾನವ ಶಾಸ್ತ್ರಜ್ಞ, ಅಧಿಕಾರಿ. ಹರ್ಬಟ್ ಹೋಪ್ ರಿಸ್ಲೆ ಇವನ ಪೂರ್ಣ ಹೆಸರು. 1851 ಜನವರಿ 4 ರಂದು ಜನಿಸಿದ. ತಂದೆ ಜಾನ್ ಹೊಲ್ ಪೊರ್ಡ್ ರಿಸ್ಲೆ. ಇವರು ಮೂಲತಃ ವಿನ್‍ಚಸ್ಟರ್‍ನಿಂದ ಬಂದವರು. ಈತ 1873ರಲ್ಲಿ ಬಿ.ಎ. ಪದವಿಯನ್ನು ಪಡೆದ. ಭಾರತದ ಇಂಡಿಯನ್ ಸಿವಿಲ್ ಸರ್ವಿಸ್‍ನ ಸೇವೆಯ ಮೇರೆಗೆ ಭಾರತಕ್ಕೆ ಬಂದ (1873). ಈತನ ಸೇವೆ ಮಿಡ್ನಾಪುರದಲ್ಲಿ ಪ್ರಾರಂಭವಾಯಿತು. ಆಗ ಅಲ್ಲಿನ ವಿವಿಧ ಸಂಸ್ಕøತಿ ಮತ್ತು ವೈವಿಧ್ಯಮಯ ಜನಸಮೂಹ ಕಂಡು, ಅವರಬಗ್ಗೆ ಆಸಕ್ತಿ ಮೂಡಿ ಅಧ್ಯಯನವನ್ನು ಆರಂಭಿಸಿದ, ಓರಾನ್ ಆದಿವಾಸಿಗಳ ಬಗ್ಗೆ ಪ್ರಬಂಧವನ್ನು ಬರೆದ.

ಹಂಟರ್ ಎಂಬಾತ ಭಾರತೀಯ ಸಂಖ್ಯಾಶಾಸ್ತ್ರ ಸರ್ವೇಕ್ಷಣ (1869) ವನ್ನೂ ಇಂಪೀರಿಯಲ್ ಗೆಜಿಟಿಯ ರನ್ನೂ (1881) ಪ್ರಕಟಿಸಿದ. ರಿಸ್ಲೆಯ ಒಲವು ಮಾನವಶಾಸ್ತ್ರ, ಸಮಾಜ ಶಾಸ್ತ್ರದ ಕಡೆ ಹೆಚ್ಚು ಇದ್ದುದರಿಂದ ಇವನನ್ನು ಭಾರತೀಯ ಸಂಖ್ಯಾಶಾಸ್ತ್ರ ಸರ್ವೇಕ್ಷಣೆಯಲ್ಲಿ ಸಹಾಯಕ ನಿರ್ದೇಶಕನಾಗಿ ಸೇರಿಸಿ ಕೊಳ್ಳಲಾಯಿತು(1875). ಈತ ಗುಡ್ಡಗಾಡು ಜಿಲ್ಲೆಗಳಾದ ಹಜಾರಿಬಾಗ್ ಮತ್ತು ಲೂಹೋಡಗದ ಗೆಜಿಟಿಯರನ್ನು ಹೊರತಂದ. ಇವನ ಕಾರ್ಯ ದಕ್ಷತೆಯನ್ನು ಅರಿತ ಪಶ್ಚಿಮ ಬಂಗಾಲ ಸರ್ಕಾರ 1879ರಲ್ಲಿ ಇವನನ್ನು ಸಹಾಯಕ ಕಾರ್ಯದರ್ಶಿಯಾಗಿ ನೇಮಿಸಿತು. ಈತ ಅನಂತರ ತನ್ನ ಕಾರ್ಯ ವ್ಯಾಪ್ತಿಯನ್ನು ಛೋಟಾ ನಾಗಪುರಕ್ಕೆ ವಿಸ್ತರಿಸಿದ(1880). ಜರ್ಮನ್ ಮಹಿಳೆಯೊಬ್ಬಳನ್ನು ಮದುವೆಯಾದ. ಈತನ ಕಾರ್ಯ ದಕ್ಷತೆಯನ್ನು ಮೆಚ್ಚಿದ ಬಂಗಾಲದ ಲೆಫ್ಟಿನೆಂಟ್ ಗೌರ್ನರ್ ರಿವರ್ಸ್ ತಾಮ್‍ಸನ್ ಇವನನ್ನು ಬುಡಕಟ್ಟು ಸಮೂಹದ ಬಗ್ಗೆ ಅಧ್ಯಯನ ಮಾಡಲು ಆಯ್ಕೆ ಮಾಡಿದ (1885). ಜೇಮ್ಸ್ ಎಂಬಾತ ತಾನು ಪಶ್ಚಿಮ ಬಂಗಾಲದ ಜನರ ಬಗ್ಗೆ ಕೈಗೊಂಡ ಅಧ್ಯಯನದ ಅಪೂರ್ಣ ಮಾಹಿತಿಗಳನ್ನು ರಿಸ್ಲೆಗೆ ನೀಡಿದ. ಅದನ್ನು ಬಳಸಿಕೊಂಡ ಈತ ಅಪಾರ ಪರಿಶ್ರಮದಿಂದಾಗಿ ದಿ ಡಿಸ್ಕ್ರಿಪ್ಟ್ ಎತ್ನಾಲಜಿ ಆಫ್ ಬೆಂಗಾಲ್ (1872) ಮತ್ತು ಗೆಜಿಟಿಯರ್ ಆಫ್ ಸಿಕ್ಕಿಂ (1894) ಎಂಬ ಗ್ರಂಥಗಳನ್ನು ಪ್ರಕಟಿಸಿದ.

ಸಂಸ್ಕøತಿ ಅಧ್ಯಯನದಲ್ಲಿ ಮಾನವಶಾಸ್ತ್ರದ ಮಹತ್ತ್ವನ್ನು ಅರಿತ ಈತ ಭಾರತದ ಸಿವಿಲ್ ಸರ್ವಿಸ್‍ನಲ್ಲಿ ಮಾನವಶಾಸ್ತ್ರವನ್ನು ಬೋಧಿಸಬೇ ಕೆಂದು ಪ್ರತಿಪಾದಿಸಿದ. ಇದನ್ನು ಆರ್.ಸಿ. ಟೆಂಪಲ್ ಅನುಮೋದಿಸಿದ (1913). ಇದಕ್ಕೆ ಬ್ರಿಟಿಷ್ ಮಾನವಶಾಸ್ತ್ರಜ್ಞರೂ ಸಹಮತ ವ್ಯಕ್ತಪಡಿಸಿ ದರು. ತದನಂತರ ಮಾನವಶಾಸ್ತ್ರವನ್ನು ಶಾಲೆ ಕಾಲೇಜುಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಬೋಧಿಸಲು ಪ್ರಾರಂಭಿಸಲಾಯಿತು. ಅನಂತರ ಈತ ಜನಗಣತಿಯ ಕಮೀಷನರಾಗಿ ನೇಮಕಗೊಂಡ. (1901 ಮತ್ತು 1911).

1901 ಮತ್ತು 1911ರ ಜನಗಣತಿಯ ವರದಿಗಳನ್ನು ಈತ ಪೂರ್ಣ ಗೊಳಿಸಿದ. ದಿ ಪೀಪಲ್ ಆಫ್ ಇಂಡಿಯ ಎಂಬ ಪುಸ್ತಕವನ್ನು ಪ್ರಕಟಿಸಿದ(1908). ಲಾರ್ಡ್ ಕರ್ಜನ್‍ನ ಆಳಿಕೆಯಲ್ಲಿ ಈತನನ್ನು ಗೃಹ ಕಾರ್ಯದರ್ಶಿಯಾಗಿ ನೇಮಿಸಲಾಯಿತು (1909). ಈತ ಎತ್ನೊಲಾಜಿಕಲ್ ಸರ್ವೆಯಲ್ಲಿ ನಿರ್ದೇಶಕನಾಗಿ, ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್‍ನ ಅಧ್ಯಕ್ಷನಾಗಿ, ಇಂಡಿಯನ್ ಮ್ಯೂಸಿಯಂನ ಟ್ರಸ್ಟಿಯಾಗಿ, ರಾಣಿ ವಿಕ್ಟೋರಿಯ ಮೆಮೊರಿಯಲ್ ಕಮಿಟಿ ಕಾರ್ಯದರ್ಶಿಯಾಗಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ. ಭಾರತೀಯ ಸಿವಿಲ್ ಸರ್ವಿಸ್‍ನ ಸೇವೆಯ ತರುವಾಯ ಇಂಗ್ಲೆಂಡ್‍ನಲ್ಲಿ ಭಾರತದ ಕಚೇರಿಗೆ ಕಾರ್ಯದರ್ಶಿ ಯಾಗಿ ನೇಮಕವಾದ(1910). ಭಾರತದ ಸಾಮಾಜಿಕ ಮತ್ತು ಮಾನವಶಾಸ್ತ್ರೀಯ ಅಧ್ಯಯನ ವಿಧಾನಗಳಲ್ಲಿ ಪ್ರಮುಖ ಸ್ಥಾನಗಳಿಸಿದ್ದ ಈತ 1911 ಸೆಪ್ಟೆಂಬರ್ 30 ರಂದು ವಿಂಬಲ್ಡನ್‍ನಲ್ಲಿ ನಿಧನನಾದ.
	(ಎಚ್.ಎಂ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ